ಸಮೂಹ ಸಂಪರ್ಕ ಮಾಧ್ಯಮಗಳು

	ಆಧುನಿಕ ಯಂತ್ರೋಪ ಕರಣಗಳ ಸಹಾಯದಿಂದ ದೇಶದೇಶಗಳ ಮಧ್ಯೆ, ವ್ಯಕ್ತಿವ್ಯಕ್ತಿಗಳ ಮಧ್ಯೆ ಏಕಕಾಲಕ್ಕೆ ಸಂಪರ್ಕಸಾಧಿಸುವ ವ್ಯವಸ್ಥೆ ಪತ್ರಿಕೆ, ರೇಡಿಯೊ, ಟೆಲಿವಿಶನ್ ಮತ್ತು ಸಿನಿಮಾ. ಇವುಗಳೇ ಸಮೂಹ ಸಂಪರ್ಕ ಮಾಧ್ಯಮಗಳು. ಈ ಮಾಧ್ಯಮಗಳಿಂದ ಮಾಹಿತಿ, ಸುದ್ದಿ ಅಥವಾ ವಿಷಯಗಳನ್ನು ಏಕಕಾಲದಲ್ಲಿ ಬಹುಮಂದಿಗೆ ತಲುಪಿಸಬಹುದು. ಉದಾಹರಣೆಗೆ ಲಕ್ಷUಟ್ಟಲೆ ದಿನಪತ್ರಿಕೆಗಳನ್ನು ಪ್ರತಿದಿನ ಮುದ್ರಿಸಲಾಗುವುದು. ರೇಡಿಯೊ ಮತ್ತು ಟಿ.ವಿ.ಕೇಂದ್ರಗಳು ಆಧುನಿಕ ತಂತ್ರಜ್ಞಾನದಿಂದ ದೇಶದ ಜನಸಮೂಹಕ್ಕೆ ಲಭ್ಯ. ಈ ಮಾಧ್ಯಗಳು ಕೇವಲ ಸುದ್ದಿ ಪ್ರಸಾರಮಾತ್ರವಲ್ಲದೆ ನಮ್ಮ ಸಂಸ್ಕøತಿ ಹಾಗೂ ಪರಂಪರೆಯನ್ನು  ಸಂರಕ್ಷಿಸುವುದಾಕ್ಕೂ ಜನಸಮೂಹಕ್ಕೆ ಮಾಹಿತಿ, ಶಿಕ್ಷಣ, ಬೋಧನೆ ಮತ್ತು ಮನರಂಜನೆ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಮಾಧ್ಯಮಗಳು ತಮ್ಮ ಆರ್ಥಿಕ ಅವಶ್ಯಕತೆ ಪೂರೈಕೆಗಾಗಿ ಜಾಹಿರಾತುಗಳನ್ನು ಪ್ರಸಾರ ಮಾಡುವುವು. ಜೊಹಾನ್ಸ್ ಗುಟೆನ್‍ಬರ್ಗ್ 1454ರಲ್ಲಿ ಮಾಡಿದ ಅಚ್ಚುಮೊಳೆಯ ಅನ್ವೇಷಣೆಯಿಂದಾಗಿ ಮುದ್ರಣಯಂತ್ರದ ಉಪಯೋಗ ಬಂದು ಪತ್ರಿಕೆಗಳನ್ನು ಗ್ರಂಥಗಳನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸಲು ಅನುಕೂಲವಾಯಿತು. ಬರುಬರುತ್ತ ಈ ಪತ್ರಿಕಾ ಮಾಧ್ಯಮ ಹಳೆಯದಾದ ಸಂಪರ್ಕ ಸಾಧನವೆನಿಸಿತು. ಭಾರತದಲ್ಲಿ 1780ರಲ್ಲಿ ಬೆಂಗಾಲ್ ಗೆಜೆಟ್ ಪತ್ರಿಕೆ ಪ್ರಾರಂಭವಾಯಿತು. ಪತ್ರಿಕೆಗಳಲ್ಲಿ ದಿನಪತ್ರಿಕೆ ಮತ್ತು ನಿಯತ ಕಾಲಿಕ ಅಥವಾ ಸಂಕೀರ್ಣ ಪತ್ರಿಕೆಗಳೆಂದು ಅವುಗಳು ಪ್ರಕಟವಾಗುವ ಕಾಲವನ್ನಾಧರಿಸಿ ವಿಂಗಡಿಸಲಾಗಿದೆ. ಭಾರತ ಸಂವಿಧಾನ ಪರಿಚ್ಛೇದ 19(1)(9) ಅನ್ವಯ ಭಾರತದಲ್ಲಿ ಯಾರು ಬೇಕಾದರೂ ಪತ್ರಿಕೆಯನ್ನು ಪ್ರಕಟಿಸಬಹುದು. ಮೊದಲು ಭಾರತೀಯ ಪತ್ರಿಕಾ ರಿಜಿಸ್ಟ್ರಾರ್‍ರವರಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವಿದೆ. 

	ನಿಯತಕಾಲಿಕಗಳಲ್ಲಿ ಕ್ರೀಡೆಯಿಂದ ಹಿಡಿದು ಜ್ಯೋತಿಶ್ಶಾಸ್ತ್ರದವರೆಗೆ ಮತ್ತು ಮಹಿಳೆಯರಿಂದ ಯುವಜನಾಂಗದ ವರೆವಿಗೂ ಅನೇಕ ವರ್ಗದ ವಿವಿಧ ಪತ್ರಿಕೆಗಳಿವೆ.

	ಮೊದಲ ಪ್ರೆಸ್ ಕಮಿಷನ್ನಿನ ಶಿಫಾರಸ್ಸಿನ ಅನ್ವಯ, ಭಾರತದಲ್ಲಿ ಪ್ರಕಟವಾಗುವ ಪತ್ರಿಕೆಗಳನ್ನು ಪ್ರಕಟಣೆಗೆ ಮುನ್ನ ನೋಂದಣಿ ಮಾಡಿಸಬೇಕಾದುದು ಕಡ್ಡಾಯ ಇದಕ್ಕಾಗಿ ದೆಹಲಿಯಲ್ಲಿ ದಾಖಲಾತಿ ಕಾರ್ಯಾಲಯ 1956ರಲ್ಲಿ ಆರಂಭವಾಯಿತು. ರಿಜಿಸ್ಟ್ರಾರ್ ಕಛೇರಿಯಲ್ಲಿ ಉದ್ದೇಶಿತ ಪತ್ರಿಕೆಯ ಹೆಸರನ್ನು ನೋಂದಣಿ ಮಾಡಿಸಿ, ಆ ಹೆಸರಿನ ಬೇರೆ ಪತ್ರಿಕೆ ಇಲ್ಲವೆಂದು ನಿಖರವಾದ ಮೇಲೆ, ಅನುಮತಿ ಲಭ್ಯವಾಗುತ್ತಿತ್ತು. ರಿಜಿಸ್ಟ್ರಾರರು ನೋಂದಣಿ ಅಧಿಕಾರಿಗಳು ಪ್ರತಿವರ್ಷ ಪತ್ರಿಕೆಗಳು ಸಲ್ಲಿಸುವ ಸ್ವಯಂ ವಿವರಗಳನ್ನು ಕ್ರೋಢಿಕರಿಸಿ, ಕೇಂದ್ರ ಸರಕಾರಕ್ಕೆ ರಾಷ್ಟ್ರದ ಪತ್ರಿಕೆಗಳ ಬಗೆಗೆ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. 

	ಪ್ರೆಸ್ ರಿಜಿಸ್ಟ್ರಾರರ 2002-03 ಸಾಲಿನ ವರದಿಯಂತೆ ಭಾರತದಲ್ಲಿ ನೋಂದಣಿಯಾದ ದಿನಪತ್ರಿಕೆಗಳು, ನಿಯತ ಕಾಲಿಕೆಗಳ ---ಸಂಖ್ಯೆ-55,780 (ಮಾರ್ಚ್ 31, 2003). ಅವುಗಳಲ್ಲಿ 5966 ದಿನಪತ್ರಿಕೆಗಳ, 358ಮದ್ವೈ/ತ್ರೈ/ ವಾರಪತ್ರಿಕೆಗಳು, 19,631 ವಾರಪತ್ರಿಕೆಗಳ, 7,356 ಪಾಕ್ಷಿಕ, 16,109 ಮಾಸ ಪತ್ರಿಕೆಗಳ, 3919 ತ್ರೈಮಾಸಿಕ, 516 ವಾರ್ಷಿಕ ಮತ್ತು 1925 ಇತರ ನಿಯತ ಕಾಲಿಕೆಗಳು. ಆದರೆ, ರಿಜಿಸ್ಟ್ರಾರರಿಗೆ ತಮ್ಮ ಪ್ರಕಟಣೆ ಬಗೆಗೆ ವಿವಿರ ಸಲ್ಲಿಸಿದ ಪತ್ರಿಕೆಗಳ ಸಂಖ್ಯೆ ಕೇವಲ 7,156. ಅವುಗಳ ಒಟ್ಟು ಪ್ರಸಾರ ಸಂಖ್ಯೆ 14,20,05,543 ಎಂಬುದನ್ನು ಗಮನಿಸಬೇಕು.
ನೋಂದಣಿಯಾದ ಪತ್ರಿಕೆಗಳ ವಿವರ (2002-2003

ಭಾಷೆ
ದೈನಿಕ
ದ್ವೈ/ತ್ರೈ ವಾರಪತ್ರಿಕೆ
ವಾರಪತ್ರಿಕೆ
ಪಾಕ್ಷಿಕ
ಮಾಸಿಕ
ತ್ರೈಮಾಸ
ದ್ವೈಮಾಸಿಕ
ಅರ್ಧವಾರ್ಷಿಕ
ವಾರ್ಷಿಕ
ಒಟ್ಟು

ಇಂಗ್ಲಿಷ್
437
37
1086
789
3255
1401
925
211
8141

ಹಿಂದಿ
2645
127
10802
3300
4122
775
251
45
22067

ಅಸ್ಸಾಮಿ
20
3
80
39
69
13
10
1
235

ಬೆಂಗಾಲಿ
107
15
657
393
754
205
513
25
2869

ಗುಜರಾತಿ
170
14
1197
241
658
54
72
15
2421

ಕನ್ನಡ
396
6
444
315
793
57
27
4
2042

ಕಾಶ್ಮೀರಿ
0
0
1
0
0
0
0
0
1

ಕೊಂಕಣಿ
1
0
3
1
5
2
0
0
12

ಮಲಯಾಳಂ
231
6
190
169
866
67
40
9
1578

ಮಣಿಪುರಿ
16
0
7
5
11
7
5
0
51

ಮರಾಠಿ
433
21
1473
249
647
134
54
127
3138

ನೇಪಾಲಿ
4
2
26
6
13
18
7
0
76

ಓರಿಯಾ
80
3
179
100
317
94
23
4
800

ಪಂಜಾಬಿ
107
15
379
105
294
36
19
1
956

ಸಂಸ್ಕøತ
4
0
9
5
18
18
6
0
60

ಸಿಂಧಿ
13
0
40
11
39
10
2
0
115

ತಮಿಳು
373
43
422
262
1129
40
27
8
2304

ತೆಲುಗು
210
4
293
244
671
34
18
2
1476

ಉರ್ದು
550
21
1370
387
554
79
19
3
2983

ದ್ವಿಭಾಷಾ
92
21
758
426
1491
423
180
46
3437

ಬಹುಭಾಷಾ
20
5
130
77
272
72
38
14
628

ಇತರೆ
57
15
85
32
131
54
15
1
390

ಒಟ್ಟು
5966
358
19631
7356
16109
3919
1925
516
55780

	ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಬಾರದ ರೀತಿಯಲ್ಲಿ ಹಾಗೂ ಪತ್ರಿಕೆಗಳ ದುರುಪಯೋಗವನ್ನು ಸಾರ್ವಜನಿಕ ವಲಯದಲ್ಲಿ ತಡೆಯಲು ಭಾರತೀಯ ಪತ್ರಿಕಾ ಮಂಡಳಿ 1965ರಲ್ಲಿ ಅಸ್ತಿತ್ತ್ವಕ್ಕೆ ಬಂತು. ಇದರ ಪ್ರಥಮ ಅಧ್ಯಕ್ಷರು ನ್ಯಾಯಮೂರ್ತಿ ಎನ್. ರಾಜಗೋಪಾಲ ಐಯ್ಯಂಗಾರ್. ಇದರ ಪ್ರಮುಖ ಕರ್ತವ್ಯ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ, ಪತ್ರಿಕಾ ವೃತ್ತಿನಿಷ್ಠತೆಯ ಪರಿಪಾಲನೆ, ಸಾರ್ವಜನಿಕ ಹಕ್ಕು ಮತ್ತು ಜವಾಬ್ದಾರಿಗಳಿಗೆ ಪತ್ರಿಕೆಗಳಿಂದ ಚ್ಯುತಿಬಾರದ ರೀತಿಯಲ್ಲಿ ಕಾರ್ಯನಿರ್ವಹಣೆ ಮತ್ತು ಪತ್ರಿಕೆಗಳನ್ನು ಸಾರ್ವಜನಿಕ ಹಿತಾಸಕ್ತಿಗನುಗುಣವಾಗಿ ನಡೆಸಲು ಅನುವು ಮಾಡಿಕೊಡುವುದಾಗಿದೆ.

	ಪತ್ರಿಕೆಗಳಿಗೆ ಸುದ್ದಿನೀಡಲು ಸುದ್ದಿಸಂಸ್ಥೆಗಳು ಆವಶ್ಯಕ, ಪತ್ರಿಕಾಲಯಗಳು ಓದುಗರಿಗೆ ಪತ್ರಿಕೆ ಮಾರಾಟಮಾಡಿದರೆ, ಸುದ್ದಿಸಂಸ್ಥೆಗಳು ಪತ್ರಿಕೆಗಳಿಗೆ ಸುದ್ಧಿಯನ್ನು, ಸುದ್ಧಿಚಿತ್ರಗಳನ್ನು ಮಾರಾಟಮಾಡುತ್ತವೆ. ರಾಯಿಟರ್, ಅಸೋಸಿಯೇಟೆಡ್ ಪ್ರೆಸ್, ಯುನೈಟೆಡ್ ಪ್ರೆಸ್, ಇಂಟರ್‍ನ್ಯಾಶನಲ್ ಹಾಗೂ ಏಜೆನ್ಸಾ ಫ್ರಾನ್ಸ್ ಪ್ರೆಸ್‍ಗಳು ವಿಶ್ವದ ಪ್ರತಿಷ್ಠಿತ ಸುದ್ಧಿಸಂಸ್ಥೆಗಳು. ಯುನೈಟೆಡ್ ನ್ಯೂಸ್ ಆಫ್ ಇಂಡಿಯ (ಯುಎನ್‍ಐ) ಮತ್ತು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಗಳು (ಪಿಟಿಐ) ಭಾರತದ ಸುದ್ಧಿ ಸಂಸ್ಥೆಗಳು. ಪ್ರೆಸ್ ಟ್ರಸ್ಟ್ ಆಫ್ ಇಂಡಿಯ 1949ರ ಜನವರಿ 1ರಿಂದ ಪ್ರಾರಂಭ ಮಾಡಿತು. ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಸುದ್ಧಿಗಳನ್ನು ಪತ್ರಿಕಾ ಸಂಸ್ಥೆಗಳಿಗೆ ದೂರದರ್ಶನ ಮಾಧ್ಯಮಗಳಿಗೆ ಸುದ್ಧಿ ಮತ್ತು ಚಿತ್ರಗಳನ್ನು ಪೂರೈಸುವುದು, ಯುನೈಟೆಡ್ ನ್ಯೂಸ್ ಆಫ್ ಇಂಡಿಯ (ಯು.ಎನ್.ಐ.) ಮಾರ್ಚ್ 21, 1961ರಿಂದ ಸುದ್ಧಿ, ಸುದ್ಧಿಚಿತ್ರಗಳನ್ನು ಪೂರೈಕೆ ಮಾಡುತ್ತಿದೆ.

	ವಿದ್ಯುನ್ಮಾನ ಮಾಧ್ಯಮಗಳಲ್ಲಿ ರೇಡಿಯೊ ಅತ್ಯಂತ ಹಳೆಯದಾದ ಸಮೂಹ ಸಂಪರ್ಕ ಮಾಧ್ಯಮ. ಅಮೆರಿಕದ ಪಿಟ್ಸ್‍ಬರ್ಗ್‍ನಲ್ಲಿ ಪ್ರಪಂಚದ ಪ್ರಥಮ ರೇಡಿಯೊ ಪ್ರಸಾರ 1920ರಲ್ಲಿ ಪ್ರಾರಂಭವಾಯಿತು. ಭಾರತದಲ್ಲಿ ಆಗಿನ ಬಾಂಬೆನಗರದಲ್ಲಿ ಪ್ರಥಮ ರೇಡಿಯೊ ಪ್ರಸಾರವು 1921 ಆಗಸ್ಟ್ 20ರಂದು ಪ್ರಾರಂಭವಾಯಿತು.

	ರೇಡಿಯೊ ಶ್ರವ್ಯ ಮಾಧ್ಯಮವಾದ್ದರಿಂದ ಕಾರ್ಯಕ್ರಮಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು. ಆಧುನಿಕ ತಂತ್ರಜ್ಞಾನದಿಂದ ಈಗ ಇದೊಂದು ಸಂಚಾರಿ ಮಾಧ್ಯಮವಾಗಿದೆ. ಮನೆಯ ಒಳಗೆ, ಹೊರಗೆ ಹಾಗೂ ವಾಹನಗಳಲ್ಲಿ ಇದನ್ನು ಬಳಸಬಹುದು. ಏಕಮುಖ ಸಂವಹನವಾಗಿದ್ದ ರೇಡಿಯೊ ಇಂದು ತಂತ್ರಜ್ಞಾನದ ಮೂಲಕ ದ್ವಿಮುಖ ಸಂವಾದದ ಸಾಧನವಾಗಿದೆ. ಇಂದಿಗೂ ರೇಡಿಯೊ ಸುದ್ದಿ ಹಾಗೂ ಸಂಗೀತ ಪರಿವಹನದ ಮುಖ್ಯ ಮಾಧ್ಯಮವಾಗಿ ಉಪಯೋಗದಲ್ಲಿದೆ.

	ಭಾರತೀಯ ಆಕಾಶವಾಣಿ ಇಂದು 213 ಪ್ರಸಾರ ಕೇಂದ್ರಗಳನ್ನು ಹೊಂದಿದೆ. ಇದು ಪ್ರಸಾರ ಭಾರತಿ ಸ್ವಾಯುತ್ತ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟಿದೆ. ಸೇ. 91.37 ರಷ್ಟು ಭೌಗೋಳಿಕ ಪ್ರದೇಶ ವ್ಯಾಪ್ತಿಯನ್ನು ಮತ್ತು ಸೇ. 99.13ರಷ್ಟು ಜನಸಂಖ್ಯೆಯನ್ನೂ ಮುಟ್ಟಿದೆ. ಇಲ್ಲಿಯವರೆಗೆ ಸರ್ಕಾರಿ ಸ್ವಾಮ್ಯದಲ್ಲಿದ್ದ ರೇಡಿಯೊ ಒಡೆತನವನ್ನು 2002ರಲ್ಲಿ ಖಾಸಗಿ ವಲಯಕ್ಕೆ ಹಂತ ಹಂತವಾಗಿ ಸರ್ಕಾರ ವಹಿಸಿಕೊಡುತ್ತಿದೆ. ಈ ನೀತಿಯ ಪ್ರಯೋಜನ ಪಡೆದ ಮೊದಲಿಗರಲ್ಲಿ ಟೈಂಮ್ಸ್ ಮತ್ತು ಸ್ಟಾರ್ ಗುಂಪಿನವರು. ರೇಡಿಯೋ ಎಫ್ ಎಂ 91 ಮತ್ತು ರೇಡಿಯೊ ಮಿರ್ಚಿ ಎನ್ನುವ ಖಾಸಗಿ ಒಡೆತನದ ರೇಡಿಯೋ ಪ್ರಸಾರವನ್ನು ಪ್ರಾರಂಭಿಸಿವೆ. ಈ ಖಾಸಗಿ ರೇಡಿಯೋ ಕೇಂದ್ರಗಳು ಸುದ್ಧಿಯನ್ನು ಪ್ರಸಾರ ಮಾಡುವಂತಿಲ್ಲ. ಶಿಕ್ಷಣ ಮತ್ತು ಮನರಂಜನೆಗಾಗಿ ಮಾತ್ರ ಈ ಖಾಸಗಿ ರೇಡಿಯೋ ಕೇಂದ್ರಗಳು ತಮ್ಮ ಪ್ರಸಾರಮಾಧ್ಯಮವನ್ನು ಬಳಸಿಕೊಳ್ಳಬಹುದಾಗಿದೆ.

	20ನೆಯ ಶತಮಾನ ಕಂಡ ಪ್ರಪಂಚದ ಅತ್ಯಂತ ಪರಿಣಾಮಕಾರಿ ಸಮೂಹ ಮಾಧ್ಯಮ ಟೆಲಿವಿಶನ್. ಜನಸಮೂಹದ ಮಾಧ್ಯಮವಾಗಿದ್ದ ಸಿನಿಮಾದ ಜನಪ್ರಿಯತೆಯನ್ನು ಕುಗ್ಗಿಸಿದ ದೈತ್ಯ ಮಾಧ್ಯಮವೆನಿಸಿತು. ವಿಶ್ವದ ಪ್ರಪ್ರಥಮ ಟೆಲಿವಿಶನ್ ಪ್ರಸಾರ 1936ರಲ್ಲಿ ಪ್ರಾರಂಭವಾದದ್ದು ಬ್ರಿಟನ್‍ನಲ್ಲಿ. ಭಾರತದ ನವದೆಹಲಿಯಲ್ಲಿ ಪ್ರಯೋಗಾತ್ಮಕವಾಗಿ ಟೆಲಿವಿಶನ್ ಪ್ರಸಾರ 1959 ಸೆಪ್ಟೆಂಬರ್ 15ರಂದು ಪ್ರಾರಂಭವಾಯಿತು. ದೃಶ್ಯ, ಶ್ರವ್ಯ, ಚಲನೆ ಹಾಗೂ ಬಣ್ಣಗಳ ಸಮ್ಮಿಲನದಿಂದ ಯಾವುದೇ ಸುದ್ದಿ ಅಥವಾ ಕಾರ್ಯಕ್ರಮಗಳನ್ನು ಮನೆಯಲ್ಲೆ ಕುಳಿತು ನೋಡಬಹುದಾದ ಅದ್ಭುತ ಮಾಧ್ಯಮ ಟೆಲಿವಿಶನ್. ಪ್ರಪಂಚದ ಯಾವ ಮೂಲೆಯಿಂದಾದರೂ ಸರಿ ಕ್ರೀಡೆಯಿಂದ ಹಿಡಿದು ಯುದ್ಧದವರೆಗಿನ ಸುದ್ದಿ ಘಟನೆಗಳನ್ನು ಅವುಗಳು ನಡೆಯುವ ಸಮಯದಲ್ಲೆ ನೇರವಾಗಿ ನೋಡಬಹುದಾದ ತಂತ್ರಜ್ಞಾನ ಟಿ.ವಿ. ಕ್ಯಾಮರದಿಂದ ಸಾಧ್ಯ. ಸಿನಿಮಾ ರೀಲಿಗೆ ಬೇಕಾದ ರಾಸಾಯನಿಕ ಸಂಸ್ಕರಣ ಟಿ.ವಿ. ಟೇಪ್ ಅಥವಾ ಡಿಸ್ಕ್‍ಗಳಿಗೆ ಅವಶ್ಯಕವಿಲ್ಲ. ಇದರಿಂದಾಗಿ ಟಿ.ವಿ. ಇಂದು ಪ್ರಥಮಸ್ಥಾನದಲ್ಲಿದೆ. ಟೆಲಿವಿಶನ್ ಅತ್ಯಂತ ಪರಿಣಾಮಕಾರಿ ಶಿಕ್ಷಣ ಮಾಧ್ಯಮ ಕೂಡ. ಇದನ್ನು ಹೆಚ್ಚಾಗಿ ಮನರಂಜನೆ ಸಾಧನವಾಗಿ ಬಳಸುತ್ತಿರುವುದರಿಂದ ಅಪಾರವಾದ ಜಾಹಿರಾತು ಆದಾಯವನ್ನು ಗಳಿಸುತ್ತಿದೆ. ಕಾರ್ಯಕ್ರಮ ತಯಾರಿಕೆಯಿಂದ ಹಿಡಿದು ಪ್ರಸಾರಮಾಡುವ ತಂತ್ರಜ್ಞಾನದ ವರೆಗೂ ಇದು ಅತ್ಯಂತ ದುಬಾರಿ ಮಾಧ್ಯಮ.

	ಟೆಲಿವಿಶನ್ ಪ್ರಸಾರ ಎರಡು ಬಗೆಯವು. ಒಂದು ಭೂಆಧಾರಿತ (ಟೆರಿಸ್ಟ್ರಿಯಲ್) ಮತ್ತು ಇನ್ನೊಂದು ಉಪಗ್ರಹ (ಸೆಟಲೈಟ್) ಆಧಾರಿತ. ದೂರದರ್ಶನದ ಸೇ. 80ರಷ್ಟು ಛಾನಲ್‍ಗಳು ಭೂಆಧಾರಿತವಾಗಿದ್ದು ಖಾಸಗಿ ಛಾನಲ್‍ಗಳು ಸಂಪೂರ್ಣವಾಗಿ ಉಪಗ್ರಹ ಆಧಾರಿತವಾಗಿವೆ.

	ಸರ್ಕಾರಿ ಸ್ವಾಮ್ಯದ ದೂರದರ್ಶನ ಪ್ರಪಂಚದ ಅತೀ ದೊಡ್ಡ ಪ್ರಸಾರ ಜಾಲವನ್ನು ಹೊಂದಿರುವ ಸಂಸ್ಥೆ. ಇದರ ಆಡಳಿತ ಸ್ವಾಯುತ್ತ ಸಂಸ್ಥೆಯಾದ ಪ್ರಸಾರ ಭಾರತಿಯ ವ್ಯಾಪ್ತಿಗೆ ಒಳಪಟ್ಟಿದೆ. ಇದೊಂದು ಸಾರ್ವಜನಿಕ ಸೇವಾ ಪ್ರಸಾರ ಸಂಸ್ಥೆ. 2004ರ ಅಂಕಿ-ಅಂಶಗಳ ಪ್ರಕಾರ ಇದು 1402 ಭೂಆಧಾರಿತ ಪ್ರಸಾರ ಕೇಂದ್ರಗಳನ್ನು ಮತ್ತು 40 ಟೆಲಿವಿಶನ್ ಸ್ಟುಡಿಯೊಗಳನ್ನು ಹೊಂದಿದೆ. ದೂರದರ್ಶನದ ಪ್ರಸಾರ ಸೇ. 90.4ರಷ್ಟು ಭೌಗೋಳಿಕ ಪ್ರದೇಶವನ್ನು ವ್ಯಾಪಿಸಿದೆ. 1991ರಿಂದ ಜಿûೀ ಟಿ.ವಿ. ಛಾನಲ್‍ನಿಂದ ಪ್ರಾರಂಭವಾದ ಭಾರತೀಯ ಟೆಲಿವಿಶನ್ ಒಡೆತನ ಖಾಸಗಿ ವಲಯಕ್ಕೂ ಲಭಿಸಿದೆ.

	ಜಗತ್ತಿನ ಮಾಯಾಲೋಕ ಸಿನಿಮಾ, ಅದ್ಭುತವಾದ ಭ್ರಮಾಲೋಕ ವನ್ನು ಸೃಷ್ಟಿಸುವ ಶಕ್ತಿ ಸಿನಿಮಾ ಮಾಧ್ಯಮಕ್ಕಿದೆ. ಬಡವರು ಶ್ರೀಮಂತರೆನ್ನದೆ, ಸುಶಿಕ್ಷಿತರು ಅಶಿಕ್ಷಿತರೆನ್ನದೆ, ಜಾತಿ ವರ್ಗವೆನ್ನದೆ, ಮೇಲು ಕೀಳೆಂಬ ಭಾವನೆಯಿಲ್ಲದೆ, ಎಲ್ಲ ವರ್ಗದ ಜನರನ್ನು ಅಯಸ್ಕಾಂತದಂತೆ ಆಕರ್ಷಿಸಿದ ಮಾಧ್ಯಮ ಸಿನಿಮಾ. ಅಗಸ್ಟಿ ಮತ್ತು ಲೂಯಿಸ್ ಲುಮ್ಯೇರ್‍ರವರು ಪ್ಯಾರಿಸ್ ನಗರದಲ್ಲಿ 1895 ಡಿಸೆಂಬರ್ 28ರಂದು ಪ್ರಪ್ರಥಮವಾಗಿ ಸಿನಿಮಾವನ್ನು ಪ್ರದರ್ಶಿಸಿದರು. ಸಿನಿಮಾದ ಜನಕ ಲುಮ್ಯೇರ್ ಸಹೋದರರು ಬಾಂಬೆಯಲ್ಲಿ 1896 ಜುಲೈ 7ರಂದು ಚಲನಚಿತ್ರದ ಪ್ರದರ್ಶನವನ್ನು ಮಾಡಿದರು. ಭಾರತದ ಪ್ರಥಮ ಚಲನಚಿತ್ರ ನಿರ್ಮಿಸಿದ ಕೀರ್ತಿ ದಾದಾ ಸಾಹೇಬ್ ಫಾಲ್ಕೆಯವರಿಗೆ ಸಲ್ಲುತ್ತದೆ. ಭಾರತೀಯ ಚಲನಚಿತ್ರದ ಪಿತಾಮಹ ಎಂದು ಕರೆಯಲ್ಪಡುವ ಫಾಲ್ಕೆಯವರು 1913 ಮೇ 3ರಂದು ರಾಜಾ ಹರಿಶ್ಚಂದ್ರ ಎನ್ನುವ ಮೂಕಿ ಚಿತ್ರವನ್ನು ತಯಾರಿಸಿದರು. ಭಾರತದ ಪ್ರಥಮ ವಾಕ್ ಚಿತ್ರ ಆಲಂ ಆರಾವನ್ನು ಇಂಪೀರಿಯಲ್ ಸಿನಿಮಾ ಕಂಪನಿಯವರು ನಿರ್ಮಿಸಿ, ಇರಾನಿಯವರು ನಿರ್ದೇಶಿಸಿದ್ದರು. ಇದರ ಪ್ರದರ್ಶನ 1931 ಮಾರ್ಚ್ 14ರಂದು ನಡೆಯಿತು.

	ಭಾರತ ಪ್ರತಿವರ್ಷ ಸು. 1000 ಚಲನಚಿತ್ರಗಳನ್ನು ಹಾಗೂ 900 ಸಣ್ಣಚಿತ್ರಗಳನ್ನು ನಿರ್ಮಿಸುತ್ತದೆ. ಸು. 1.5 ಕೋಟಿ ಜನ ಪ್ರತಿದಿನ ಸಿನಿಮಾ ನೋಡುತ್ತಾರೆ ಎಂದು ಅಂದಾಜು ಮಾಡಲಾಗಿದೆ. ಭಾರತದಲ್ಲಿ ಸು. 13,000ಕ್ಕೂ ಹೆಚ್ಚು ಸಿನಿಮಾ ಮಂದಿರಗಳಿವೆ. ಉತ್ತಮ ಚಿತ್ರಗಳ ತಯಾರಿಕೆಗೆ ಆರ್ಥಿಕ ನೆರವು ನೀಡಲು ಸರಕಾರ 1960ರಲ್ಲಿ ಫಿಲ್ಮ್ ಫೈನಾನ್ಸ್ ಕಾರ್ಪೋರೇಶನ್‍ನನ್ನು ಸ್ಥಾಪಿಸಿತು. ಇದರ ಸ್ಥಾಪನೆಯಿಂದಾಗಿ ಕಲಾತ್ಮಕ ಚಿತ್ರಗಳು ತಯಾರಾಗಲು ಸಾಧ್ಯವಾಯಿತು. 1975ರಲ್ಲಿ ಹಿಂದೆ ಇದ್ದ ಎಫ್.ಎಫ್.ಸಿ ಸಂಸ್ಥೆಯನ್ನು ರಾಷ್ಟ್ರೀಯ ಸಿನಿಮಾ ಅಭಿವೃದ್ಧಿ ನಿಗಮವಾಗಿ ಪರಿವರ್ತಿಸಲಾಯಿತು. ಈ ಸಂಸ್ಥೆಯು ಚಿತ್ರನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವುದರ ಜೊತೆಗೆ, ವಿದೇಶಿ ಚಿತ್ರಗಳನ್ನು ಆಮದು ಮಾಡಿಕೊಳ್ಳುವುದು, ಭಾರತೀಯ ಚಿತ್ರಗಳನ್ನು ರಫ್ತುಮಾಡುವುದು ಮತ್ತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ಏರ್ಪಡಿಸುವ ಜವಾಬ್ದಾರಿ ಹೊಂದಿದೆ.

	ಸಿನಿಮಾ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆ ಸಿನಿಮಾ ನಿಯಂತ್ರಣ ಮಂಡಳಿ. ಇದನ್ನು 1918ರ ಸಿನಿಮಾಟೋಗ್ರಫಿ ಮಸೂದೆ ಪ್ರಕಾರ 1920ರಲ್ಲೆ ಅಸ್ತಿತ್ತ್ವಕ್ಕೆ ತರಲಾಯಿತು. ಸ್ವಾತಂತ್ರ್ಯಾನಂತರ ಜಾರಿಗೊಳಿಸಲಾಯಿತು. ಈ ಕಾಯಿದೆಯ ಪ್ರಕಾರ ಭಾರತದಲ್ಲಿ ನಿರ್ಮಾಣವಾದ ಅಥವಾ ಪ್ರದರ್ಶಿತವಾಗುವ ಪ್ರತಿಯೊಂದು ಚಲನಚಿತ್ರವೂ ನಿಯಂತ್ರಣ ಮಂಡಳಿಯಿಂದ ಕಡ್ಡಾಯವಾಗಿ ಪ್ರದರ್ಶನಯೋಗ್ಯ ಪ್ರಮಾಣ ಪತ್ರ ಪಡೆಯಬೇಕೆಂಬ ನಿಯಮವಿದೆ. ಇದಕ್ಕೆ ವಿದೇಶಿ ಚಿತ್ರಗಳೂ ಹೊರತಲ್ಲ. ಸೆನ್ಸಾರ್ ಮಂಡಳಿಯನ್ನು 1983ರಲ್ಲಿ ಕೇಂದ್ರ ಸಿನಿಮಾ ಅರ್ಹತಾಪತ್ರ ಮಂಡಳಿ ಎಂದು ಪುನರ್‍ನಾಮಕರಣ ಮಾಡಲಾಯಿತು. 

	14 ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಆದರೆ, ಕೇವಲ 9 ಪ್ರಾದೇಶಿಕ ಮಂಡಳಿಗಳು ಅಸ್ತಿತ್ವದಲ್ಲಿವೆ. 2003ರಲ್ಲಿ 877 ಭಾರತೀಯ 282 ವಿದೇಶಿ ಚಿತ್ರಗಳನ್ನು ವೀಕ್ಷಿಸಿ ಪ್ರಮಾಣ ಪತ್ರ ನೀಡಿತು. 1173 ಭಾರತೀಯ ಕಿರು ಚಿತ್ರಗಳ 228 ವಿದೇಶಿ ಕಿರು ಚಿತ್ರಗಳು, 16 ಭಾರತೀಯ ವಿಡಿಯೋ ಚಿತ್ರಗಳು, 920 ವಿದೇಶಿ ವಿಡಿಯೋ ಚಿತ್ರಗಳಿಗೆ ಅಂಗೀಕಾರ ನೀಡಿತು. 920 ಭಾರತಿಯ ಕಿರು ವಿಡಿಯೋ ಚಿತ್ರಗಳ, 182 ವಿದೇಶಿ ವಿಡೀಯೋ ಚಿತ್ರಗಳಿಗೆ ಒಪ್ಪಿಗೆ ಪತ್ರ ನೀಡಿದೆ.  	
     									(ಎನ್.ಯು.ಆರ್.; ಎಂ.ಬಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ